ಶಾಸನಗಳು
ಅಶೋಕನ ಬಂಡೆ ಶಾಸನಗಳು (ಕರ್ನಾಟಕ)

ಚಕ್ರವರ್ತಿ ಅಶೋಕನ ಬಂಡೆ ಶಾಸನಗಳು ದೊರೆತಿರುವ ಮುಖ್ಯವಾದ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಅಶೊಕನು ಕ್ರಿಸ್ತಪೂರ್ವ 272-232 ರ ಅವಧಿಯಲ್ಲಿ ರಾಜ್ಯಭಾರ ಮಾಡಿದನು. ಅವನು ಮೌರ್ಯವಂಶದ ಮೂರನೆಯ ದೊರೆ. ಅವನ ಸಾಮ್ರಾಜ್ಯದ ದಕ್ಷಿಣದ ಗಡಿಗೆರೆಗಳನ್ನು ಈ ಶಾಸನಗಳು ಸೂಚಿಸುತ್ತವೆ. ಕರ್ನಾಟಕದಲ್ಲಿರುವ ಅಶೋಕನ ಶಾಸನಗಳು, ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ, ಸಿದ್ದಾಪುರ ಮತ್ತು ಜಟಿಂಗ ರಾಮೇಶ್ವರ, ಕೊಪ್ಪಳ ಜಿಲ್ಲೆಯ ಕೊಪ್ಪಳ, ಬಳ್ಳಾರಿ ಜಿಲ್ಲೆಯ ನಿಟ್ಟೂರು ಮತ್ತು ಉದೆಗೊಳು ಹಾಗೂ ರಾಯಚೂರು ಜಿಲ್ಲೆಯ ಮಸ್ಕಿಗಳಲ್ಲಿ ನಿಕ್ಷಿಪ್ತವಾಗಿವೆ. ಕರ್ನಾಟಕದಲ್ಲಿ ಒಟ್ಟು ಹನ್ನೊಂದು ಇಂತಹ ಶಾಸನಗಳು ದೊರಕಿವೆ. ಅವೆಲ್ಲವನ್ನೂ ಪ್ರಾಕೃತ ಭಾಷೆ ಮತ್ತು ಬ್ರಾಹ್ಮೀ ಲಿಪಿಯಲ್ಲಿ ಬರೆಯಲಾಗಿದೆ. ನೇರವಾಗಿ, ಅಶೋಕನ ಹೆಸರನ್ನು ಹೇಳುವ ಶಾಸನಗಳು ಇಡೀ ದೇಶದಲ್ಲಿ ಎರಡೇ ಎರಡು. ಅವುಗಳಲ್ಲಿ ಒಂದು ಮಸ್ಕಿಯ ಶಾಸನ. ಉಳಿದ ಶಾಸನಗಳಲ್ಲಿ ಅವನನ್ನು ದೇವಾನಾಂ ಪ್ರಿಯ ಎಂದು ಕರೆಯಲಾಗಿದೆ.

ಕೊಪ್ಪಳದ ಶಾಸನಗಳು, ಗವಿಮಠ ಮತ್ತು ಪಾಲ್ಕಿಗುಂಡು ಎಂಬ ಗುಡ್ಡಗಳಲ್ಲಿಯೂ ಸಿದ್ದಾಪುರದ ಶಾಸನವು ಎಮ್ಮೆತಮ್ಮನ ಗುಂಡು ಎಂಬ ಸ್ಥಳದಲ್ಲಿಯೂ ದೊರೆತಿವೆ.

ಬೌದ್ಧಧರ್ಮದ ತತ್ವಗಳನ್ನು ಪ್ರಸಾರ ಮಾಡುವುದು ಮತ್ತು ಚಕ್ರವರ್ತಿ ಅಶೋಕನ ಅನುಭವಗಳನ್ನು ಹಂಚಿಕೊಳ್ಳುವುದು ಈ ಶಾಸನಗಳ ಮುಖ್ಯ ಉದ್ದೇಶಗಳು. ಅವು ತಮಗೆ ಸಮಕಾಲೀನವಾದ ಜೀವನದ ವಿವರಗಳನ್ನು ಕೊಡುವುದರಿಂದ ಮತ್ತು ಅಶೋಕನು ಎದುರಿಸಿದ ಮಾನಸಿಕ ಸಂಘರ್ಷಗಳಿಗೆ ಕನ್ನಡಿ ಹಿಡಿಯುವುದರಿಂದ, ಬಹಳ ಮಹತ್ದದ ದಾಖಲೆಗಳಾಗಿವೆ. ಒಬ್ಬ ವ್ಯಕ್ತಿಯು ತನ್ನ ಹಿರಿಯರು, ಬಂಧುಗಳು ಮತ್ತು ಮಿತ್ರರೊಡನೆ ವ್ಯವಹರಿಸುವಾಗ ಅನುಸರಿಸಬೇಕಾದ ಅನೇಕ ವಿಧಿ ನಿಷೇಧಗಳನ್ನು ವಿವರಿಸುವುದರಿಂದಲೂ ಈ ಶಾಸನಗಳು ಮಹತ್ವದ ಸಾಂಸ್ಕೃತಿಕ ದಾಖಲೆಗಳಾಗಿವೆ. ಕರ್ನಾಟಕದಲ್ಲಿರುವ ಅಶೋಕನ ಶಾಸನಗಳನ್ನು ಕುರಿತು ಪ್ರಸಿದ್ಧ ಇತಿಹಾಸಜ್ಞರಾದ ರೊಮಿಲಾ ಥಾಪರ್ ಅವರು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಬಹಳ ಮುಖ್ಯವಾಗಿವೆ. ಅವುಗಳ ಒಂದು ಭಾಗವನ್ನು ಇಲ್ಲಿ ನೀಡಲಾಗಿದೆ:

ಕರ್ನಾಟಕದಲ್ಲಿ, ಬಂಡೆಗಳ ಮೇಲ್ಮೆಯ ಮೇಲೆ ಕೆತ್ತಿರುವ ಅಶೋಕನ ಶಾಸನಗಳು ಅನೇಕ. ಏಕೆಂದರೆ, ಅದು ಬಂಗಾರವು ದೊರೆಯುವ ಪ್ರದೇಶವಾಗಿದ್ದು, ಅಲ್ಲಿ ಮೌರ್ಯಸಾಮ್ರಾಟರು ಗಣಿಗಾರಿಕೆ ಮಾಡಿದಂತೆ ತೋರುತ್ತದೆ. ಕುತೂಹಲಕಾರಿಯಾದ ಸಂಗತಿಯೆಂದರೆ, ಇದು ದ್ರಾವಿಡ ಪ್ರದೇಶ. ಇಲ್ಲಿ ಇದಕ್ಕೆ ಮೊದಲು ಯಾವುದೇ ಲಿಪಿಯನ್ನು ಬಳಸುತ್ತಿರಲಿಲ್ಲ. ಆದರೆ, ಇಲ್ಲಿನ ಎಲ್ಲ ಶಾಸನಗಳೂ ಪ್ರಾಕೃತಭಾಷೆ ಮತ್ತು ಬ್ರಾಹ್ಮೀ ಲಿಪಯಲ್ಲಿ ರಚಿತವಾಗಿವೆ. ಪ್ರಾಕೃತವಾದರೋ ಉತ್ತರ ಭಾರತದ ಇಂಡೋ ಆರ್ಯನ್ ಭಾಷೆ. ಹೀಗಾಗಿ ಅಧಿಕಾರಿಗಳು ಶಾಸನಗಳನ್ನು ಪ್ರಾಕೃತದಲ್ಲಿ ಓದಿ ಹೇಳಿ, ಅನಂತರ ಅವುಗಳನ್ನು ಸ್ಥಳೀಯ ಸಮುದಾಯದ ಭಾಷೆಗಳಿಗೆ ಅನುವಾದಿಸಿ ಹೇಳಬೇಕಾಗುತ್ತಿತ್ತು. ವಾಯುವ್ಯ ಭಾರತದಲ್ಲಿ, ಇಂತಹುದೇ ಶಾಸನಗಳನ್ನು ಗ್ರೀಕ್ ಮತ್ತು ಅರಮಾಯಿಕ್ ಭಾಷೆಗಳಿಗೆ ಅನುವಾದಿಸಲಾಗಿತ್ತು. ಅಂತಹುದೇನೂ ಇಲ್ಲಿ ನಡೆಯಲಿಲ್ಲ. ಇಲ್ಲಿ, ಸ್ಥಳೀಯವಾದ ಲಿಪಿಯೂ ಇರಲಿಲ್ಲವೆನ್ನುವುದು ಇದಕ್ಕೆ ಕಾರಣವಾಗಿರಬಹುದು. ಪ್ರಾಯಶಃ ರಾಜಕೀಯವಾದ ಪರಿಗಣನೆಯಲ್ಲಿ ಈ ಪ್ರದೇಶಕ್ಕೆ ಹೆಚ್ಚಿನ ಮಹತ್ವವೂ ಇರಲಿಲ್ಲವೇನೋ. ಏಕೆಂದರೆ ಇಲ್ಲಿ ಸಣ್ಣಪುಟ್ಟ ಪಾಳೆಪಟ್ಟುಗಳಿದ್ದವೇ ಹೊರತು ದೊಡ್ಡ ರಾಜ್ಯಗಳಿರಲಿಲ್ಲ. ಮೌಖಿಕತೆಯನ್ನು ಮೂಲನೆಲೆಯಾಗಿ ಹೊಂದಿದ್ದ ಸಮಾಜದಲ್ಲಿ, ಸಾಕ್ಷರತೆಯನ್ನೇ ಅಧಿಕಾರದ ಚಿಹ್ನಯಾಗಿ ಸ್ಥಾಪಿಸುವುದೂ ಇದರ ಉದ್ದೇಶವಾಗಿರಬಹುದು. ಪ್ರಾಯಶಃ ಈ ಶಾಸನಗಳನ್ನೂ ಇದೇ ನೆಲೆಯಲ್ಲಿ ನೋಡಲಾಗುತ್ತಿತ್ತು

(ಮೂಲ ಲೇಖನವನ್ನು ಈ ಕೆಳಗೆ ಸೂಚಿಸಿರುವ ವೆಬ್ ಲಿಂಕ್ ನಲ್ಲಿ ಓದಬಹುದು.)

 

 

  1. Guest Essay: Languages and Scripts of Ashoka's Inscriptions ...

(ರೊಮಿಲಾ ಥಾಪರ್ ಅವರ ಲೇಖನ)

ಮುಖಪುಟ / ಶಾಸನಗಳು